ಆಫ್ರಿಕದ ಧರ್ಮ

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

ಆಫ್ರಿಕ ಖಂಡದಲ್ಲಿ ನಾಗರಿಕತೆಯ ವಿವಿಧ ಶ್ರೇಣಿಗಳಲ್ಲಿರುವ ಸಮಾಜಗಳನ್ನು ಕಾಣುತ್ತೇವೆ. ಅಲ್ಲಿನ ಧರ್ಮಗಳೂ ವಿವಿಧವಾಗಿವೆ. ಯೂರೋಪಿನಿಂದ ವಲಸೆ ಬಂದ ಬಿಳಿಯ ಜನಾಂಗಗಳು ಕ್ರೈಸ್ತ ಧರ್ಮಕ್ಕೆ ಸೇರಿದವರು. ಅಬಿಸೀನಿಯದವರು ಸುಮಾರು ಸಾವಿರ ವರ್ಷಗಳಿಂದ ಕ್ರೈಸ್ತಧರ್ಮದ ಅನುಯಾಯಿಗಳಾಗಿರುವರು. ಅನೇಕ ನೀಗ್ರೊಗಳು ಈಚೆಗೆ ಕ್ರೈಸ್ತಧರ್ಮದ ಅನುಯಾಯಿಗಳಾಗಿದ್ದಾರೆ. ಈಜಿಪ್ಟ್ ಸೂಡಾನ್, ಮೊರಾಕೊ ಮೊದಲಾದ ದೇಶಗಳಲ್ಲಿ ವಾಸಿಸುವರು ಮುಸಲ್ಮಾನರು. ಆದರೆ ಆಫ್ರಿಕದಲ್ಲಿ ವಾಸಿಸುವವರು ಹೆಚ್ಚಾಗಿ ಆದಿವಾಸಿ ಜನಾಂಗಗಳಿಗೆ ಸೇರಿದವರು. ಇಲ್ಲಿ ಆದಿವಾಸಿಗಳ ಧರ್ಮಗಳನ್ನು ಸಂಕ್ಷೇಪವಾಗಿ ನಿರೂಪಿಸಲಾಗಿದೆ.
ಆಫ್ರಿಕದ ಅನೇಕ ಜನಾಂಗಗಳಿಗೆ ಅವರ ಪೂರ್ವಿಕರೇ ದೇವತೆಗಳು. ಪಿತೃಗಳಿಗೆ ಸರಿಯಾದ ರೀತಿಯಲ್ಲಿ ಸಂಸ್ಕಾರಗಳನ್ನು ಮಾಡದೇ ಇದ್ದಲ್ಲಿ ಅವರು ತಮಗೆ ಕಷ್ಟಗಳನ್ನು ಕೊಡುವರೆಂಬ ನಂಬಿಕೆಯಿದೆ. ಇದನ್ನು ಪಶ್ಚಿಮ ಆಫ್ರಿಕದ ಹೋಮಯನ್ ನೀಗ್ರೊಗಳಲ್ಲಿ ಕಾಣಬಹುದು. ಹಲವೆಡೆಗಳಲ್ಲಿ ಪಿತೃದೇವತೆಗಳಿಗೆ ನರಬಲಿಯನ್ನು ಕೊಡುವ ಪದ್ಧತಿ ಇತ್ತು. ಸಾಧಾರಣವಾಗಿ ನರಬಲಿಗೆ ಆಹುತಿಯಾಗುತ್ತಿದ್ದವರು ವಯಸ್ಸಾದ ಯುದ್ಧ ಖೈದಿಗಳು, ಮರಣದಂಡನೆಗೆ ಗುರಿಯಾದ ತಪ್ಪಿತಸ್ಥರು.
ಕಪ್ಪು ಮತ್ತು ಬಿಳಿಯ ಜನರು ಒಬ್ಬ ದೇವನಿಂದಲೇ ಸೃಷ್ಟಿಸಲ್ಪಟ್ಟರೆಂಬ ನಂಬಿಕೆ ಆಫ್ರಿಕಾದ ಜನಗಳಲ್ಲಿ ಇದೆ. ಕಾಂಗೊ ನೀಗ್ರೊಗಳ ಪ್ರಕಾರ ದೇವರು ಎಲ್ಲರನ್ನೂ ಮೊದಲು ಕಪ್ಪಾಗಿ ಸೃಷ್ಟಿಸಿದ್ದನೆಂದೂ ಕೆಲವರು ಬೇಗ ತಮ್ಮ ಬಣ್ಣ ತೊಳೆದುಕೊಂಡು ಬೆಳ್ಳಗಾದರೆಂದು ಭಾವಿಸಲಾಗಿದೆ. ಇವೆಲ್ಲ ನೀಗ್ರೊಗಳ ಪ್ರಕಾರ ದೇವರು ಇಬ್ಬರೂ ಒಟ್ಟಾಗಿ ಒಂದೇ ಕಡೆ ಇದ್ದರು, ಅನಂತರ ಅವರ ಉಪಯೋಗಕ್ಕಾಗಿ ದೇವರು ಎರಡು ಬುಟ್ಟಿಗಳನ್ನು ಕಳುಹಿಸುವುದಾಗಿಯೂ ಇಬ್ಬರೂ ಅದನ್ನು ಸಮವಾಗಿ ಹಂಚಿಕೊಳ್ಳಬೇಕೆಂದು ಆಣತಿಯಿತ್ತ. ಬುಟ್ಟಿಗಳಲ್ಲಿ ಒಂದು ಸಣ್ಣದು ಇನ್ನೊಂದು ದೊಡ್ಡದು. ಕಪ್ಪು ಜನರು ದುರಾಸೆಯಿಂದ ದೊಡ್ಡ ಬುಟ್ಟಿಯನ್ನು ತೆಗೆದುಕೊಂಡರು. ಅದರೊಳಗೆ ಕಳೆಗುದ್ದಲಿ, ಬಲೆ, ಬೇಟೆಯಾಡುವ ಆಯುಧಗಳಿದ್ದುವು. ಸಣ್ಣ ಬುಟ್ಟಿಯಲ್ಲಿ ಕೇವಲ ಒಂದು ಪುಸ್ತಕವಿತ್ತು. ಬಿಳಿಯ ಜನ ಆ ಪುಸ್ತಕದ ಸಹಾಯದಿಂದ ಬುದ್ಧಿವಂತರಾಗಿ ಅತುಳೈಶ್ವರ್ಯವನ್ನು ಸಂಪಾದಿಸಿದರು. ಕಪ್ಪುಜನ ಅಸೂಯೆಯಿಂದ ಬಿಳಿಯರಿಗೆ ಆಗಾಗ್ಗೆ ತೊಂದರೆ ಕೊಡುತ್ತಿದ್ದರು. ಆಗ ದೇವರು ಆಕಾಶದಿಂದ ಒಂದು ದೊಡ್ಡ ಹಗ್ಗವನ್ನು ಇಳಿಬಿಟ್ಟು ಬಿಳಿಯರನ್ನು ಸಮುದ್ರದಾಚೆಗೆ ಸುಖವಾಗಿ ತಲುಪಿಸಿದ.

ಒಳ್ಳೆಯವರು ಸ್ವರ್ಗಕ್ಕೆ ಹೋಗಿಯೇ ಹೋಗುತ್ತಾರೆಂಬ ನಂಬಿಕೆ ಅನೇಕ ನೀಗ್ರೊ ಜನಾಂಗಗಳಲ್ಲಿ ಇದೆ. ದೇವರು ಸ್ವರ್ಗದಿಂದ ಒಂದು ಹಗ್ಗವನ್ನು ಬಿಡುತ್ತಿದ್ದನೆಂದೂ ಭೂಮಿಯ ಸತ್ಪುರುಷರು ಅದನ್ನು ಹಿಡಿದುಕೊಂಡು ಸ್ವರ್ಗಕ್ಕೆ ಹೋಗುತ್ತಿದ್ದರೆಂದೂ ಅವರ ಕಲ್ಪನೆ. ಕಾಲಕ್ರಮೇಣ ಆ ಹಗ್ಗ ಹಳೆಯದಾಗಿ ಕಿತ್ತುಹೋಯಿತೆಂದು ಹೇಳುತ್ತಾರೆ.
ಆಫ್ರಿಕದ ಜನ ಹಲವು ಪ್ರಾಣಿಗಳನ್ನು ತಮ್ಮ ಬುಡಕಟ್ಟಿನ ಚಿಹ್ನೆಗಳಾಗಿ ಪರಿಗಣಿಸಿದ್ದರು. ಆ ಪ್ರಾಣಿಗಳನ್ನು ಅವರು ವಿಶೇಷವಾಗಿ ಗೌರವಿಸುತ್ತಿದ್ದರು. ಅವುಗಳನ್ನು ಕೊಲ್ಲುತ್ತಿರಲಿಲ್ಲ. ಒಟ್ಟಪಿಯನ್ನರು ಮೀನನ್ನೂ, ಬಕಲಾಹರಿಗಳು ಸಿಂಹವನ್ನೂ, ಮಕೊಂಡೆಯವರು ಚಿರತೆಯನ್ನೂ, ಬಾಕ್ಮೀನರು ಮೊಸಳೆಯನ್ನೂ, ಬಕಟ್‍ಲರು ಕಪಿಯನ್ನೂ, ಅಶಾಂತಿಯನ್ನರು ಕಾಡುಬೆಕ್ಕನ್ನೂ ತಮ್ಮ ಬುಡಕಟ್ಟುಗಳ ಚಿಹ್ನೆಗಳನ್ನಾಗಿ ಪರಿಗಣಿಸಿದ್ದರು.

ಆಫ್ರಿಕದ ಜನಾಂಗಗಳಲ್ಲಿ ಆಕಾಶದಲ್ಲಿರುವ ವಸ್ತುಗಳ ಪೈಕಿ ಚಂದ್ರನಿಗೆ ಉನ್ನತ ಸ್ಥಾನವಿದೆ. ದಹೋಮಿಯ ನೀಗ್ರೊಗಳು ಸೂರ್ಯಚಂದ್ರರನ್ನು ಗಂಡಹೆಂಡಿರೆಂದು ಪರಿಗಣಿಸಿದ್ದರೂ ಚಂದ್ರನಿಗೆ ಅತ್ಯುನ್ನತ ಸ್ಥಾನವನ್ನು ಕೊಟ್ಟಿದ್ದರು. ಹಾಟೆಂಟಾಟರು ಆಚರಿಸುತ್ತಿದ್ದ ಹಬ್ಬಗಳಲ್ಲಿ ಚಂದ್ರನ ಕುಣಿತ ಬಹಳ ದೊಡ್ಡಹಬ್ಬ. ಅವರ ಪ್ರಾರ್ಥನೆ ಹೀಗಿದೆ : ಎಲೈ ಚಂದ್ರನೇ, ನಿನಗೆ ಸುಖಾಗಮನ. ನಮಗೆ ವಿಶೇಷವಾಗಿ ಜೇನನ್ನು ಕೊಡು. ನಮ್ಮ ಪಶುಗಳಿಗೆ ಅಮಿತವಾಗಿ ಮೇವನ್ನು ಕೊಟ್ಟು ಅವುಗಳು ನಮಗೆ ಸಮೃದ್ಧಿಯಾಗಿ ಹಾಲನ್ನು ಕೊಡುವಂತೆ ಕರುಣಿಸು.

ಒಟ್ಟಿನಲ್ಲಿ ಆಫ್ರಿಕದ ಜನ ಹೆಚ್ಚಾಗಿ ಪಿತೃದೇವತಾರಾಧಿಗಳಾಗಿದ್ದರು. ಅವರಲ್ಲಿ ಅನೇಕ ಮೂಢನಂಬಿಕೆಗಳಿದ್ದವು. ಅವರು ಉಪಯೋಗಿಸುವಷ್ಟು ತಾಯಿತಿಗಳನ್ನು ಇನ್ನೆಲ್ಲಿಯೂ ಕಾಣಲಾರೆವು. ಎಲ್ಲ ಆದಿ ಜನಾಂಗಗಳೂ ಇಂಥದೇ ಮತಧರ್ಮಪ್ರವೃತ್ತಿಗಳನ್ನು ಹೊಂದಿದ್ದವು. ಅವುಗಳ ಹಿಂದೆ ಪ್ರಕೃತಿಯ ಅಮಿತವೂ ಅನೂಹ್ಯವೂ ಆದ ಶಕ್ತಿಗಳ ಹಿಂದೆ ಮಾನವನಿಗಿದ್ದ ಭಯ ಭೀತಿಗಳು, ಭಕ್ತಿ ಗೌರವಗಳು ಎದ್ದುಕಾಣುತ್ತವೆ. 						
(ಎಚ್.ಎಂ.ಎಸ್.)